ಶಶಿಕಲಾ ಸಿಎಂ ಆಗೋದಕ್ಕೆ ವೇದಿಕೆ ಸಿದ್ಧ!

0
474

ತಮಿಳುನಾಡಿನಲ್ಲಿ ಅಧಿಕಾರ ಹಸ್ತಾಂತರ
ಸಿಎಂ ಆಗ್ತಾರಾ 3 ದಶಕಗಳ ಜಯಾ ಒಡನಾಡಿ?

ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಶಶಿಕಲಾ ನಟರಾಜನ್​ ಅವರು ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೇರಲು ವೇದಿಕೆ ಸಿದ್ಧವಾಗುತ್ತಿದೆ. ಈ ಮೂಲಕ 3 ದಶಕಗಳ ಜಯಾ ಒಡನಾಡಿಗೆ ಅಧಿಕಾರ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಇದೇ ತಿಂಗಳ 9ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಕಳೆದ ಡಿಸೆಂಬರ್ 5ರಂದು ಜಯಲಲಿತಾ ನಿಧನದ ನಂತರ ಶಶಿಕಲಾ ನಟರಾಜನ್ ಸಿಎಂ ಆಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಇನ್ನು ಲೋಕಸಭೆ ಉಪಸಭಾಧ್ಯಕ್ಷ ಎಂ ತಂಬಿದುರೈ ಸೇರಿದಂತೆ ಡಿಎಂಕೆಯ ನಾಯಕರು ಮತ್ತು ಕಾರ್ಯಕರ್ತರು ಜಯಲಲಿತಾ ಅವರ ನಂತರ ಶಶಿಕಲಾ ಅವರೇ ಸಿಎಂ ಆಗಬೇಕೆಂದು ಆಗ್ರಹಿಸಿದ್ದರು. ಈ ನಡುವೆ ಡಿಸೆಂಬರ್ 31ರಂದು ಶಶಿಕಲಾ ಅವರು ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಇನ್ನು ನಿನ್ನೆ ಶಶಿಕಲಾ ಪಕ್ಷದ ಪ್ರಮುಖ ಹುದ್ದೆಗಳಿಗೆ ಹಿರಿಯ ನಾಯಕರು, ಸಚಿವರು ಮತ್ತು ಮಾಜಿ ಸಚಿವರು ಸೇರಿದಂತೆ ಅನೇಕರನ್ನು ನೇಮಿಸಿದ್ದರು. ಈ ನಡುವೆ ಮಾಜಿ ಸಿಎಂ ಜಯಲಲಿತಾ ಅವರ ಆಪ್ತರನ್ನು, ಪನ್ನೀರ್ ಸೆಲ್ವಂ ಅವರು, ಸಿಎಂ ಕಚೇರಿಯಿಂದ ದೂರ ಇಟ್ಟಿದ್ದರು. ಇದೇ ಕಾರಣದಿಂದಾಗಿ ಶಶಿಕಲಾ ಅತೃಪ್ತರಾಗಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಾಯಕತ್ವ ಬದಲಾವಣೆಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತಿದ್ದ ಸಮಯದಲ್ಲಿ, ಎರಡು ಬಾರಿ ಜಯಲಲಿತಾ ಅವರು ಅಧಿಕಾರವನ್ನು ಪನ್ನೀರ್​ ಸೆಲ್ವಂ ಅವರಿಗೆ ಹಸ್ತಾಂತರಿಸಿದ್ದರು. ಅವರ ಅನಾರೋಗ್ಯದ ನಂತರ ಕೂಡ ಸೆಲ್ವಂ ಸಿಎಂ ಆಗಿದ್ದರು. ಒಂದು ವೇಳೆ ತಮಿಳುನಾಡಿನಲ್ಲಿ ನಾಯಕತ್ವ ಬದಲಾದಲ್ಲಿ ಪನ್ನೀರ್ ಸೆಲ್ವಂ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಇನ್ನು ದಶಕಗಳ ಕಾಲ ತಮಿಳುನಾಡಿನಲ್ಲಿ ನೆಲೆಕಂಡುಕೊಳ್ಳುವಲ್ಲಿ ವಿಫಲವಾಗಿರುವ ಬಿಜೆಪಿ, ಪನ್ನೀರ್ ಸೆಲ್ವಂ ಅವರನ್ನು ಸೆಳೆಯಲು ಮುಂದಾಗುವ ಸಾಧ್ಯತೆ ಕೂಡ ದಟ್ಟವಾಗಿದೆ. ಆದರೆ, ಪನ್ನೀರ್ ಸೆಲ್ವಂ ನಡೆ ಏನು ಎಂಬುದು ಇನ್ನೂ ಖಚಿತವಾಗಿಲ್ಲ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ 

 Click this button or press Ctrl+G to toggle between Kannada and English