ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್, ಏ.19ರ ಬದಲು10ಕ್ಕೆ ಸಭೆ

0
261

ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನ ಬಳಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ  ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅಹೋರಾತ್ರಿ ಧರಣಿ ಗುರುವಾರ ಅಂತ್ಯಗೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಮುಖಂಡರೊಂದಿಗೆ ಸಂಜೆ ಸಭೆ ನಡೆಸಿದರು.

‘ಸರ್ಕಾರವು ಬೇಡಿಕೆ ಈಡೇರಿಸಲು ಬದ್ಧವಾಗಿದೆ. ಆದರೆ, ಈಗ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಲಿಖಿತ ಭರವಸೆ ನೀಡಲು ಆಗುವುದಿಲ್ಲ. ಈ ಹಿಂದೆ ಹೇಳಿದಂತೆ ಏಪ್ರಿಲ್‌ 19ರ ಬದಲು ಏಪ್ರಿಲ್‌ 10 ರಂದೇ ಸಭೆ ನಡೆಸಿ, ಕನಿಷ್ಠ ವೇತನ ನಿಗದಿ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸಿ.ಎಂ ಭರವಸೆ ನೀಡಿದರು.

ಅದಕ್ಕೆ ಒಪ್ಪಿದ ಮುಖಂಡರು, ಪ್ರತಿಭಟನಾ ಸ್ಥಳಕ್ಕೆ ಬಂದು  ಸದಸ್ಯರ ಜತೆ ಚರ್ಚೆ ನಡೆಸಿದರು. ಕೊನೆಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುವ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ಇದಾದ ನಂತರ ಸ್ಥಳಕ್ಕೆ ಬಂದ ಸಚಿವೆ ಉಮಾಶ್ರೀ, ‘ನಿಮ್ಮೊಂದಿಗೆ ಸರ್ಕಾರವಿದೆ. ಬೇಡಿಕೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಈಗ ಧರಣಿ ಕೈಬಿಡಿ’ ಎಂದು ಮನವಿ ಮಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ‘ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಅದರ ಮೇಲೆ ನಂಬಿಕೆ ಇಟ್ಟು  ಈಗ ತಾತ್ಕಾಲಿಕವಾಗಿ ಧರಣಿ ಹಿಂಪಡೆಯುತ್ತಿದ್ದೇವೆ’ ಎಂದರು.

ಮುಖ್ಯಮಂತ್ರಿ ಹೇಳಿಕೆಗೆ ಆಕ್ರೋಶ: ಧರಣಿ ಬಗ್ಗೆ ಸಿದ್ದರಾಮಯ್ಯ ಅವರು ಬುಧವಾರ ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ‘ಬಿಟ್ಟಿ ಜಾಗ, ಬಿಟ್ಟಿ ಊಟ ಸಿಗುತ್ತಿದೆ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದು ಖಂಡನೀಯ. ತಮ್ಮ ಮಾತನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಬೆವರು ಸುರಿಸಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಹಕ್ಕು ಕೇಳುತ್ತಿದ್ದೇವೆ. ನಮಗೂ ಸ್ವಾಭಿಮಾನವಿದ್ದು, ಯಾರ ಬಿಟ್ಟಿ ಊಟ ಬೇಕಿಲ್ಲ. ಈ ಜಾಗವೂ ಬಿಟ್ಟಿ ಏನಲ್ಲ. ಜನರದ್ದು’ ಎಂದು ತಿರುಗೇಟು ನೀಡಿದರು.⁠⁠⁠⁠

 Click this button or press Ctrl+G to toggle between Kannada and English