ಬಡ ಮಹಿಳೆಯರು, ಮಕ್ಕಳ ಬದುಕಿಗೆ ಬೆಳಕಾದವರು

0
207

ರಾಷ್ಟ್ರದ ರಾಜಧಾನಿ ದೆಹಲಿ ಸಮೀಪದಲ್ಲಿಯೇ ಗುರುಗ್ರಾಮವಿದೆ. ಇದು ಹರಿಯಾಣ ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಇಲ್ಲಿಯ ಬಡ ಕುಟುಂಬದ ಸದಸ್ಯೆ ಇಂದ್ರಾಣಿ ಸಿಂಗ್ ಅವರದು ಹೋರಾಟದ ಬದುಕು. ಹೆಚ್ಚೆಚ್ಚು ಓದಬೇಕೆಂಬ ಕನಸು. ಅದನ್ನು ಸಾಧಿಸುವ ಪ್ರತಿಭಾವಂತೆ ಸಹ. ಶಿಕ್ಷಣದ ಪ್ರತಿ ಹಂತದಲ್ಲಿಯೂ ಕಷ್ಟಪಟ್ಟರು. ಸರ್ಕಾರಿ ಹಾಸ್ಟೆಲ್ ಗಳು ಇವರಿಗೆ ಕೊಂಚ ಮಟ್ಟಿಗೆ ನೆರವಾದವು. ಪೈಲಟ್ ಆಗಬೇಕೆಂಬ ಹೆಬ್ಬಯಕೆ. ಆರ್ಥಿಕ ದುಸ್ಥಿತಿಯಲ್ಲಿಯೂ ಬಹು ಪರಿಶ್ರಮದಿಂದ ಪೈಲಟ್ ತರಬೇತಿ ಪಡೆದರು. ಪೈಲಟ್ ಆಗಿಯೂ ಕೆಲಸ ಮಾಡಿದರು. ಏರ್​ ಬಸ್ 320 ಅನ್ನು ಚಾಲನೆ ಮಾಡಿದ ಏಷ್ಯಾದ ಮೊಟ್ಟ ಮೊದಲ ಮಹಿಳೆ ಎಂದೆನ್ನಿಸಿಕೊಂಡರು.

ಪೈಲಟ್ ಆಗಿ ದೇಶ-ವಿದೇಶಗಳನ್ನು ಸುತ್ತಾಡಿದರೂ ಅವರ ನೋಟ ತಮ್ಮೂರಿನ ನೆಲದತ್ತಲೇ ಇತ್ತು. ಅಲ್ಲಿಯ ಕಡು ಬಡವರ ಸ್ಥಿತಿಗತಿಗಳು, ಶಿಕ್ಷಣ ಪಡೆಯಲಾಗದ ಅವರ ಮಕ್ಕಳ ಪರಿಸ್ಥಿತಿ ಅವರಿಗೆ ನೋವನ್ನುಂಟು ಮಾಡುತ್ತಿತ್ತು. ಅವರ ಏಳಿಗೆ ಸಲುವಾಗಿ ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಸಮಾನಮನಸ್ಕ ಸ್ನೇಹವಲಯ, ಮಾರ್ಗದರ್ಶಿಗಳ ಜೊತೆ ಚರ್ಚಿಸಿದರು. ಇದರ ಪರಿಣಾಮ ಕೆಲಸಕ್ಕೆ ಸೇರಿದ ಹತ್ತು ವರ್ಷಗಳ ಬಳಿಕ ಲಿಟ್ರೆಸಿ ಇಂಡಿಯಾ ಎಂಬ ಸಂಸ್ಥೆ ಸ್ಥಾಪನೆ.
ಆರ್ಥಿಕ ದುರ್ಬಲ ವರ್ಗಗಳ ಕುಟುಂಬಗಳ ಮಹಿಳೆಯರ ಏಳಿಗೆ ಸಲುವಾಗಿಯೂ ಕೆಲಸ ಮಾಡಬೇಕು ಎನ್ನುವ ತುಡಿತ ಇತ್ತು. ಇದರ ಪರಿಣಾಮ ಇಂದಾಕ್ರಾಪ್ಟ್ ಎಂಬ ಸಂಸ್ಥೆ ಆರಂಭಿಸಿದರು. ಈ ಎರಡು ಸಂಸ್ಥೆಗಳ ಆರಂಭಕ್ಕಾಗಿ ತಾವು ಅದುವರೆಗೂ ಬಹು ಪರಿಶ್ರಮದಿಂದ ಉಳಿಸಿದ ಹಣವನ್ನೆಲ್ಲ ತೊಡಗಿಸಿದರು. ಇವರು ಶ್ರಮದಿಂದ ಆರಂಭಿಸಿದ ಸಂಸ್ಥೆಗಳು ಕಾರ್ಯರೂಪಕ್ಕಿಳಿದವು.
ಆರಂಭಿಸಿದ ಕೆಲಸ ಸುಲಭದ್ದೇನಾಗಿರಲಿಲ್ಲ. ತಮ್ಮ ಮಕ್ಕಳನ್ನು ಸಣ್ಣಪುಟ್ಟ ಕೆಲಸಕ್ಕೆ ಕಳಿಸಿ

ಅವರು ಸಂಪಾದಿಸುತ್ತಿದ್ದ ಹಣವನ್ನು ಪಡೆದುಕೊಳ್ಳುತ್ತಿದ್ದ ಪೋಷಕರು ಆ ಹಣ ಕಳೆದುಕೊಳ್ಳಲು ತಯಾರಿರಲಿಲ್ಲ. ಅದೂ ಅಲ್ಲದೇ ಏನಾದರೊಂದು ಕೆಲಸ ಮಾಡುತ್ತಾ ಅಪ್ಪಅಮ್ಮನಿಗೆ ಒಂದಷ್ಟು ಕೊಟ್ಟು ಉಳಿದ ಚಿಲ್ಲರೆ ಹಣ ಬಳಸಿಕೊಳ್ಳುತ್ತಿದ್ದ ಮಕ್ಕಳಿಗೂ ಶಾಲೆಗೆ ಹೋಗುವುದೆಂದರೆ ದುಸ್ನಪ್ನ ಕಂಡಂತೆ ಆಗುತ್ತಿತ್ತು. ಲಿಟ್ರೆಸಿ ಇಂಡಿಯಾ ಸದಸ್ಯರು ಈ ಮಕ್ಕಳ ಪೋಷಕರ ಜೋಪಡಿಗಳಿಗೆ ಭೇಟಿ ನೀಡಿದರು. ಇದರಿಂದ ಆರಂಭದಲ್ಲಿ ಅಂದಿನ ಗುರ್ಗಾವ್ ನ ಲಿಟ್ರೆಸಿ ಇಂಡಿಯಾ ಶಾಲೆಗೆ 1996ರಲ್ಲಿ ದಾಖಲಾದ ಮಕ್ಕಳ ಸಂಖ್ಯೆ 5, ಲಿಟ್ರೆಸಿ ಇಂಡಿಯಾ ಶಾಲೆಯಲ್ಲಿ ಆರನೇ ವಯಸ್ಸಿನಿಂದ 16 ವರ್ಷದ ವಯೋಮಾನದವರಿಗಿನ ಮಕ್ಕಳಿಗೂ ಪ್ರವೇಶ ನೀಡಲಾಗುತ್ತದೆ. ಇವರಿಗೆಲ್ಲ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸಾಮಾನ್ಯ ಶಾಲೆಗಳಲ್ಲಿ ದೊರೆಯದೇ ಇರುವ ಶಿಕ್ಷಣವನ್ನೂ ನೀಡಲು ಆರಂಭಿಸಲಾಯಿತು. ಅವರುಗಳ ವ್ಯಕ್ತಿತ್ವ ವಿಕಸಕ್ಕೂ ಆದ್ಯತೆ ನೀಡಲಾಯಿತು. ಈ ನಿಟ್ಟಿನಲ್ಲಿ ಅವರುಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಯಿತು. ಸಂಗೀತ-ನಾಟಕದಲ್ಲಿ ತರಬೇತಿ ನೀಡಲು ಆರಂಭಿಸಿದರು.

ಬಹುತೇಕ ಮಕ್ಕಳ ಕೊಳಚೆ ಪ್ರದೇಶಗಳಿಂದ ಬರುತ್ತಿದ್ದವು. ಇವರ ಆರೋಗ್ಯದತ್ತಲೂ ಗಮನ ನೀಡಬೇಕಿತ್ತು. ಇದಕ್ಕಾಗಿ ನುರಿತ ವೈದ್ಯರ ಸಹಾಯ ಪಡೆಯಲಾಯಿತು. ಅವರು ನಿಯಮಿತವಾಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡತೊಡಗಿದರು. ಅನಾರೋಗ್ಯ ಕಂಡು ಬಂದ ಮಕ್ಕಳಿಗೆ ಸಂಸ್ಥೆ ವತಿಯಿಂದಲೇ ಉಚಿತವಾಗಿ ಚಿಕಿತ್ಸೆ ನೀಡುವಂತ ವ್ಯವಸ್ಥೆ ಆಯಿತು
ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿದರಷ್ಟೆ ಸಾಲದು. ಅವರ ಪೋಷಕರ ಆರೋಗ್ಯವನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಬೇಕು. ಹೀಗೆ ಮಾಡಿದರೆ ಮಾತ್ರ ಕುಟುಂಬದ ಆರೋಗ್ಯ ಕಾಪಾಡಲು ಸಾಧ್ಯ. ಇದನ್ನು ಅರಿತಿದ್ದ ಸಂಸ್ಥೆ ವೈದ್ಯರು ಕೊಳಚೆ ಪ್ರದೇಶಗಳಲ್ಲಿದ್ದ ಮನೆಗಳಿಗೆ ಭೇಟಿ ನೀಡಿ ಅಲ್ಲಿನ ಸದಸ್ಯರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲು ತೊಡಗಿತು.
ಈ ಎಲ್ಲ ಕೆಲಸದಿಂದ ಲಿಟ್ರೆಸಿ ಇಂಡಿಯಾ ಸಂಸ್ಥೆ ಪೋಷಕರು ಮತ್ತು ಮಕ್ಕಳ ವಿಶ್ವಾಸ ಗಳಿಸಿಕೊಳ್ಳತೊಡಗಿತು. ಈಗ ಇಂದ್ರಾಣಿ ಸಿಂಗ್ ಅವರ ಗಮನ ಈ ಮಕ್ಕಳ ತಾಯಂದಿರತ್ತ ತಿರುಗಿತು. ಅವರಲ್ಲಿ ಅನೇಕರು ನಿರುದ್ಯೋಗಿಗಳಾಗಿದ್ದರು. ಅವರಿಗೆ ಶಿಕ್ಷಣವೂ ಇರಲಿಲ್ಲ. ಏಕಕಾಲದಲ್ಲಿ ಅವರಿಗೆ ಅಕ್ಷರ ಶಿಕ್ಷಣ ಮತ್ತು ಔದ್ಯೋಗಿಕ ಶಿಕ್ಷಣ ನೀಡಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಇಂದಾಕ್ರಾಪ್ಟ್ ಭರದಿಂದ ಕೆಲಸ ಮಾಡತೊಡಗಿತು.

ಆರ್ಥಿಕ ದುಸ್ಥಿತಿಯಲ್ಲಿದ್ದ ಕುಟುಂಬಗಳ ಮಹಿಳೆಯರಿಗೆ ವಿದ್ಯೆ ಮತ್ತು ಉದ್ಯೋಗದ ಮಹತ್ವ ಹೇಳಲಾಯಿತು. ಇದರಿಂದ ಅವರಲ್ಲಿ ಕೆಲವರು ಸಂಸ್ಥೆಗೆ ಬರತೊಡಗಿದರು. ಇವರಿಗೆ ಹೊಲಿಗೆ, ಕಸೂತಿ, ತರಬೇತಿ ನೀಡಲು ಆರಂಭಿಸಿದರು. ನುರಿತ ತರಬೇತುದಾರರನ್ನು ನೇಮಿಸಿಕೊಂಡರು. ಬಿಡುವಿನ ವೇಳೆ ಈ ಎಲ್ಲ ಮಹಿಳೆಯರಿಗೂ ಅಕ್ಷರ ಶಿಕ್ಷಣವನ್ನು ನೀಡಿದರು. ಕ್ರಮೇಣ ಹೀಗೆ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಹೆಚ್ಚಾಗತೊಡಗಿತು.

ಹೊಲಿಗೆ, ಕಸೂತಿ ತರಬೇತಿಯೊಂದಿಗೆ ವಿವಿಧ ಕರಕುಶಲ ಕೆಲಸಗಳು, ಕಾಗದವನ್ನು ಬೇರೆಬೇರೆ ರೂಪದಲ್ಲಿ ಮರುಬಳಕೆ ಮಾಡುವ ತರಬೇತಿಗಳನ್ನು ನೀಡಲಾಗುತ್ತಿದೆ. ಆರಂಭದಲ್ಲಿ 5 ಮಂದಿ ತರಬೇತಿ ಪಡೆದು ಸಂಸ್ಥೆಯಲ್ಲಿಯೇ ಕೆಲಸ ಮಾಡತೊಗಿದ್ದರು. ಇಂದು ಇಂಥ ಮಹಿಳೆಯರ ಸಂಖ್ಯೆ 350ಕ್ಕೇರಿದೆ. ಇವರೆಲ್ಲ ಸುಸ್ಥಿರ ಬದುಕು ಕಂಡುಕೊಳ್ಳಲು ಸಂಸ್ಥೆ ಸಹಾಯ ಮಾಡಿದೆ.
ಆರಂಭದಲ್ಲಿ ಲಿಟ್ರೆಸಿ ಇಂಡಿಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಬಂದ ಮಕ್ಕಳ ಸಂಖ್ಯೆ ಕೇವಲ 5. ಆದರೆ ಇಂದು 25 ಸಾವಿರಕ್ಕೂ ಬಡಮಕ್ಕಳು ಶಿಕ್ಷಣ ಪಡೆದು ತಮ್ಮ ಬಾಳಲ್ಲಿ ಬೆಳಕು ಮೂಡಿಸಿಕೊಳ್ಳುತ್ತಿದ್ದಾರೆ. ಇಂದು ಲಿಟ್ರೆಸಿ ಇಂಡಿಯಾ ಮತ್ತು ಇಂದಾಕ್ರಾಪ್ಟ್ ಸಂಸ್ಥೆಗಳು ಜಾರ್ಖಂಡ್, ಬಂಗಾಳ, ರಾಜಸ್ಥಾನ, ಆಂಧ್ರ ಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಕೆಲಸ ಮಾಡುತ್ತಿವೆ. ಸಾವಿರಾರು ಕುಟುಂಬಗಳು ಮತ್ತು ಮಕ್ಕಳ ಬಾಳಲ್ಲಿ ಭರವಸೆಯ ಬೆಳಕು ಚಿಮ್ಮಲು ಕಾರಣವಾಗಿವೆ. ಇದಕ್ಕೆಲ್ಲ ಮೂಲ ಕಾರಣ ಛಲಗಾತಿ ಇಂದ್ರಾಣಿ ಸಿಂಗ್ ಅವರ ಬದ್ಧತೆ.

ಕುಮಾರ ರೈತ, ವಿಶೇಷ ಪ್ರತಿನಿಧಿ, ಸುದ್ದಿಟಿವಿ, ಬೆಂಗಳೂರು

 Click this button or press Ctrl+G to toggle between Kannada and English