ಕೇಸರಿ ವಸ್ತ್ರಧಾರಿಗಳು ಹಲ್ಲೆ ನಡೆಸಲು ಪರವಾನಗಿ ಪಡೆದಿದ್ದಾರೆ: ಅಖಿಲೇಶ್ ಯಾದವ್

0
156

ಲಖ್ನೋ: ಕೇಸರಿ ವಸ್ತ್ರಧಾರಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಪರವಾನಗಿ ಪಡೆದಿದ್ದಾರೆ ಎಂದು ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಸಿಎಂ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಸರಿ ಕರವಸ್ತ್ರಗಳನ್ನು ಧರಿಸಿದವರು ಪೊಲೀಸರು ಮತ್ತು ಪೊಲೀಸ್ ಠಾಣೆಗಳ ಮೇಲೆ ಹಲ್ಲೆ ನಡೆಸಲು ಪರವಾನಗಿ ಪಡೆದಿದ್ದಾರೆ ಎಂದರು.

ಬಲಪಂಥೀಯರ ಗುಂಪು ಆಗ್ರಾದಲ್ಲಿ ಕಾನೂನು ಉಲ್ಲಂಘಿಸಿದ ಪ್ರಕರಣದ ನಂತರ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ. ಕನೌಜ್​​ನಲ್ಲಿ ಕೂಡ ಇಂಥವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಆಗ್ರಾದಲ್ಲಿ ಕೂಡ ಇಂಥ ಘಟನೆಗಳು ನಡೆದಿವೆ. ಅಲಹಾಬಾದ್​ನಲ್ಲಿ ನಾಲ್ಕು ಜನರಿರುವ ಕುಟುಂಬದ ಮೇಲೆ ಹಲ್ಲೆ ನಡೆಸಿ ಹತ್ಯೆಗೈಯಲಾಗಿದೆ. ಇದು ಅಸಹ್ಯಕರ ಬೆಳವಣಿಗೆ ಎಂದು ಅವರು ಕಿಡಿ ಕಾರಿದ್ದಾರೆ.

ಅಖಿಲೇಶ್ ಯಾದವ್ ಅವರ ಸರ್ಕಾರ ಅಧಿಕಾರ ನಡೆಸುತ್ತಿದ್ದ ಅವಧಿಯಲ್ಲಿ ಕೇಸರಿ ಪಕ್ಷವಾದ ಬಿಜೆಪಿ ಕೂಡ ಇದೇ ರೀತಿಯ ಆಪಾದನೆಗಳನ್ನು ಮಾಡುತ್ತಿತ್ತು. ಆದರೆ, ಇದೀಗ ಪ್ರಚಂಡ ಬಹುಮತ ಪಡೆದಿರುವ ಬಿಜೆಪಿ ಅಧಿಕಾರ ನಡೆಸುತ್ತಿದ್ದು, ಪೊಲೀಸರು, ಮುಸ್ಲಿಮರು, ದಲಿತರ ಮೇಲೆ ದಾಳಿ ನಡೆಯುತ್ತಿವೆ.

ಮಧ್ಯ ವಯಸ್ಸಿನ ದಂಪತಿ ಮತ್ತು ಅವರ ಇಬ್ಬರು ಮಕ್ಕಳ ಮೇಲೆ ಅಲಹಾಬಾದ್​​ನಲ್ಲಿ ಹಲ್ಲೆ ನಡೆದಿತ್ತು. ಬದೌನ್ ಜಿಲ್ಲೆಯಲ್ಲಿ ಇಬ್ಬರು ಸೋದರಿಯರನ್ನು ಹತ್ಯೆಗೈಯಲಾಗಿತ್ತು. ಆಗ ಮಾಧ್ಯಮದವರ ಮುಂದೆ ಎಲ್ಲ ರಾಜಕೀಯ ಪಕ್ಷಗಳೂ ಅತ್ತಿದ್ದವು. ಆದರೆ, ಅಲಹಾಬಾದ್ ಘಟನೆ ಕುರಿತು ಯಾರೂ ಗಮನ ನೀಡಿಲ್ಲ ಎಂದು ಕೂಡ ಅವರು ಆರೋಪಿಸಿದರು.

ಸಹರನ್​ಪುರ ಘಟನೆಯನ್ನು ಉಲ್ಲೇಖಿಸಿದ ಅವರು, ರ್ಯಾಲಿ ವೇಳೆ ಎರಡು ಸಮುದಾಯಗಳ ನಡುವೆ ಕಲ್ಲೆಸೆತ ನಡೆದಿದೆ. ಇಲ್ಲಿ ನಡೆದದ್ದು ಮತ್ತು ನಡೆಯುತ್ತಿರುವುದರ ಕುರಿತು ವಸ್ತುಸ್ಥಿತಿ ಅಧ್ಯಯನ ವರದಿಯನ್ನು ಸಮಾಜವಾದಿ ಪಕ್ಷದ ನಿಯೋಗ ಸಿದ್ಧಪಡಿಸುತ್ತಿದೆ ಎಂದು ಕೂಡ ಅವರು ಹೇಳಿದರು. ಅಂಬೇಡ್ಕರ್ ಜಯಂತಿ ದಿನದಂದು ನಡೆದ ಘಟನೆಗಳ ಮಾಹಿತಿಯನ್ನು ನಾಳೆ ಮಾಧ್ಯಮದ ಮುಂದೆ ಬಿಡುಗಡೆ ಮಾಡುವುದಾಗಿ ಕೂಡ ಅವರು ಘೋಷಿಸಿದರು. ಗಾಯತ್ರಿ ಪ್ರಜಾಪತಿಯವರಿಗೆ ಜಾಮೀನು ಸಿಕ್ಕಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ಜಾಮೀನು ಮಂಜೂರಾಗಿರುವುದು ಒಳ್ಳೆಯದು. ಅದರಲ್ಲಿ ಏನಾದರೂ ತಪ್ಪಿದ್ದರೆ ತಿಳಿಸಿ ಎಂದರು.

ಅವರ ಕನಸಿನ ಯೋಜನೆಯಾದ ಲಖ್ನೋ – ಆಗ್ರಾ ಎಕ್ಸ್​ಪ್ರೆಸ್​ ವೇ ಕುರಿತು ಪರಿಶೀಲನೆ ನಡೆಸುತ್ತಿರುವ ಸರ್ಕಾರದ ನಡೆಯನ್ನು ಅವರು ತರಾಟೆಗೆ ತೆಗೆದುಕೊಂಡರು. ಬಿಜೆಪಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ಹೊಸದಾಗಿ ಟೆಂಡರ್ ಕರೆಯಲಿ ಎಂದು ಸವಾಲು ಹಾಕಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English