ಇವಿಎಂ ವಿವಾದ: ಸರ್ವಪಕ್ಷ ಸಭೆ ಕರೆದ ಚುನಾವಣಾ ಆಯೋಗ

0
119

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆ ಆರೋಪದ ಕುರಿತು ಚರ್ಚೆ ನಡೆಸುವ ಸಲುವಾಗಿ ಮೇ 12ರಂದು ಚುನಾವಣಾ ಆಯೋಗ ಸರ್ವಪಕ್ಷ ಸಭೆ ಕರೆದಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕಳೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದವು.

ಆದರೆ, ಇವಿಎಂಗಳನ್ನು ಹ್ಯಾಕ್ ಮಾಡುವುದು ಸ್ವತಃ ನಿರ್ಮಾಣ ಮಾಡಿರುವವರಿಂದ ಕೂಡ ಸಾಧ್ಯವಿಲ್ಲ ಎಂದು ಆಯೋಗ ಹೇಳಿತ್ತು. ಆದರೆ ಪಟ್ಟು ಬಿಡದ ವಿಪಕ್ಷಗಳು ಈ ಕುರಿತು ರಾಷ್ಟ್ರಪತಿಗೂ ದೂರು ಸಲ್ಲಿಸಿದ್ದವು. ಮಧ್ಯಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ನೀಡುವ ವೇಳೆ ಯಾವುದೇ ಪಕ್ಷದ ಗುಂಡಿಯನ್ನು ಒತ್ತಿದರೂ, ಬಿಜೆಪಿಯ ಗುಂಡಿ ಆನ್ ಆಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಮತಯಂತ್ರಗಳ ಸಾಚಾತನದ ಕುರಿತು ತಕರಾರು ಎದ್ದಿತ್ತು. ಇವಿಎಂಗಳ ವಿರುದ್ಧ ಮೊಟ್ಟ ಮೊದಲು ಬಿಎಸ್​ಪಿ ನಾಯಕಿ ಮಾಯಾವತಿ ಅಸಮಾಧಾನ ವ್ಯಕ್ತಪಡಿಸಿದ್ದರು. ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೆ ಮತ ವರ್ಗವಾಗುವಂತೆ ಇವಿಎಂಗಳನ್ನು ತಿರುಚಲಾಗಿದೆ ಎಂದಿದ್ದರು. ಅನಂತರ ಆಪ್​​ನ ಅರವಿಂದ್ ಕೇಜ್ರಿವಾಲ್ ಕೂಡ ಈ ಆರೋಪಕ್ಕೆ ದನಿಗೂಡಿಸಿದ್ದರು.

ಈ ಎಲ್ಲ ಅವಾಂತರಗಳ ನಡುವೆ ಮತದಾರರ ದೃಢೀಕರಣ ಪತ್ರವನ್ನು(ವಿವಿಪ್ಯಾಟ್) ಅಳವಡಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ವಿಚಾರಣೆ ನಡೆಸಿದ ಕೋರ್ಟ್, ಈಗಾಗಲೇ ವಿವಿಪ್ಯಾಟ್ ಅಳವಡಿಸುವಂತೆ ನಿರ್ದೇಶನ ನೀಡಿದ್ದರೂ ಇವಿಎಂಗಳಿಗೆ ಅವುಗಳನ್ನು ಅಳವಡಿಸದಿರುವುದು ಏಕೆ? ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ, ಇವಿಎಂಗಳ ತಿರುಚುವಿಕೆ ವಿಷಯದಲ್ಲಿ ತನಿಖೆ ನಡೆಯುವವರೆಗೆ ಭವಿಷ್ಯದ ಚುನಾವಣೆಗಳನ್ನು ಮತಪತ್ರದ ಮೂಲಕ ನಡೆಸುವಂತೆ ಕೂಡ ವಿಪಕ್ಷಗಳು ಆಗ್ರಹಿಸಿದ್ದವು.

ವಿವಿಪ್ಯಾಟ್ ಅಳವಡಿಸಿದ ಮೊದಲ ದೇಶ ಭಾರತವಾಗಲಿದೆ ಎಂದು ಭಾರತ ಚುನಾವಣಾ ಆಯೋದ ಮುಖ್ಯಸ್ಥ ನಸೀಮ್ ಜೈದಿ ಕಳೆದ ತಿಂಗಳು ಹೇಳಿದ್ದರು. ಆದರೆ, 16 ವಿಪಕ್ಷಗಳು ಇತ್ತೀಚೆಗೆ ಚುನಾವಣಾ ಆಯೋಗ ಮತ್ತು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಇವಿಎಂಗಳ ತಿರುಚುವಿಕೆ ಆರೋಪವನ್ನು ಹೊರಿಸಿದ್ದವು.

ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್​ಪಿ, ಆಪ್, ಸಿಪಿಐ ಪಕ್ಷಗಳು ಸೇರಿದಂತೆ ವಿಪಕ್ಷಗಳು ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಇವಿಎಂಗಳ ತಿರುಚುವಿಕೆ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ದೂರಿದ್ದವು.

ಈ ನಡುವೆ ಕೇಂದ್ರ ಸರ್ಕಾರ 16.15 ಲಕ್ಷ ವಿವಿಪ್ಯಾಟ್​ಗಳನ್ನು ಅಳವಡಿಸುವ ಸಲುವಾಗಿ 3,173.47 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದಕ್ಕಾಗಿ ಈಗಾಗಲೇ ಬಿಎಚ್​ಇಎಲ್​​ ಮತ್ತು ಇಸಿಐಗೆ ಆದೇಶವನ್ನು ಕೂಡ ನೀಡಲಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

13 total views, 13 views today
0

 Click this button or press Ctrl+G to toggle between Kannada and English