ಪಾಕ್ ದಾಳಿಯಿಂದ ಜೀವ ಭಯದಲ್ಲಿರುವ ನಾಗರಿಕರು

0
221

ರಾಜೌರಿ: ಪಾಕಿಸ್ತಾನ ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವುದರಿಂದಾಗಿ ಜಮ್ಮು ಕಾಶ್ಮೀರದ ರಾಜೌರಿ ಪ್ರಾಂತ್ಯದ ನಿವಾಸಿಗಳು ಜೀವ ಭಯದಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಪಾಕ್ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಗಳಿಗೆ ಅನೇಕ ನಾಗರಿಕರು ಬಲಿಯಾಗಿದ್ದಾರೆ. ಇದೇ ಪ್ರಾಂತ್ಯದಲ್ಲಿ ಕಳೆದ ವಾರ ನಡೆದ ಕದನ ವಿರಾಮ ಉಲ್ಲಂಘನೆ ವೇಳೆ ನಾಗರಿಕರು ಸೇನಾ ಬಂಕ್​ಗಳಲ್ಲಿ ಅವಿತುಕೊಂಡು ಜೀವ ಉಳಿಸಿಕೊಂಡ ಘಟನೆ ಕೂಡ ನಡೆದಿತ್ತು. ಕದನ ವಿರಾಮ ಉಲ್ಲಂಘನೆಯ ಕಾರಣದಿಂದಾಗಿ ಶಾಲಾ ಕಾಲೇಜುಗಳು ಮುಚ್ಚಿವೆ.

ನಮಗೆ ಎಲ್ಲಿಗೂ ಹೋಗಲು ಸ್ಥಳವಿಲ್ಲ. ನಾವು ಅಸಹಾಯಕರು. ನಮ್ಮ ಮಕ್ಕಳು ಭಯಭೀತರಾಗಿದ್ದಾರೆ. ಸರ್ಕಾರ ನಮಗೆ ನೆರವು ನೀಡಬೇಕು. ಇದು ಬೆಳೆ ಕಟಾವಿನ ಸಮಯ. ಆದರೆ ನಮಗೆ ಕೆಲಸ ಮಾಡಲು ಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆದು ನಿಂತ ಪೈರು ಹಾಳಾಗುತ್ತಿದೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ನಾವು ಮಕ್ಕಳೊಂದಿಗೆ ರಾತ್ರಿಯಿಡೀ ಅವಿತುಕಳ್ಳಬೇಕಾದ ಪರಿಸ್ಥಿತಿ ಇದೆ. ನಾವು ತೀರಾ ಕಷ್ಟಕರ ಸನ್ನಿವೇಶದಲ್ಲಿ ಸಿಲುಕಿಕೊಂಡಿದ್ದೇವೆ. ಸರ್ಕಾರ ನಮ್ಮ ನೆರವಿಗೆ ಬರುತ್ತಿಲ್ಲ. ನಮ್ಮ ಬೆಳೆಗಳು ಹಾಳಾಗುತ್ತಿವೆ ಎಂದು ಇನ್ನೊಬ್ಬ ನಾಗರಿಕರು ತಮ್ಮ ಗೋಳು ತೋಡಿಕೊಳ್ಳುತ್ತಾರೆ.

ಸ್ಟೇಷನ್ ಹೌಸ್​ನ ಅಧಿಕಾರಿ ಆಶಿಶ್ ಚೌಧರಿ, ರಾಜೌರಿಯಲ್ಲಿ ನಾಗರಿಕರನ್ನು ಉದ್ದೇಶಿಸಿ ಶೆಲ್ ದಾಳಿ ನಡೆಸಲಾಗುತ್ತಿದೆ. ನಿನ್ನೆ ಕೂಡ ಪಾಕಿಸ್ತಾನ ಆರು ಬಾರಿ ಗುಂಡಿನ ದಾಳಿ ನಡೆಸಿದೆ. ಆದರೆ, ಅದೃಷ್ಟವಶಾತ್ ಯಾವುದೇ ಸಾವು – ನೋವು ಸಂಭವಿಸಿಲ್ಲ. ಜನರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುವ ಪ್ರಯತ್ನದಲ್ಲಿದ್ದೇವೆ. ಆದರೆ, ಭಾರೀ ಗುಂಡಿನ ದಾಳಿಗಳಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಈ ನಡುವೆ ಭಾರತೀಯ ಸೇನೆ ಮತ್ತು ವಿಶೇಷ ಶೋಧ ಪಡೆಗಳು ಶೊಪೇನ್​ನಲ್ಲಿ ಶೋಧ ಕಾರ್ಯವನ್ನು ಪೂರೈಸಿವೆ. ಶೊಪೇನ್​​ನ ಹೆಫ್ ಮತ್ತು ಶಿರ್ಮಾಲ್​ ಹಳ್ಳಿಗಳನ್ನು ನಿನ್ನೆ ಮಧ್ಯರಾತ್ರಿಯಿಂದ ಪೊಲೀಸರು ಮತ್ತು ಸೈನಿರು ಶೋಧಕಾರ್ಯಕ್ಕಾಗಿ ಸುತ್ತುವರಿದಿದ್ದರು. ಈ ಪ್ರದೇಶಗಳಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಸಲಾಗಿತ್ತು. ಆದರೆ, ಯಾವುದೇ ಭಯೋತ್ಪಾದಕರು ಪತ್ತೆಯಾಗಿರುವುದಾಗಿ ವರದಿಯಾಗಿಲ್ಲ.

ಪಾಕಿಸ್ತಾನದ ಸೈನಿಕರು ಜಮ್ಮು ಕಾಶ್ಮೀರದ ಪೂಂಛ್​ನಲ್ಲಿ ಕಳೆದ ತಿಂಗಳು ಇಬ್ಬರು ಸೈನಿಕರನ್ನು ಕೊಂದ ನಂತರ ತಲೆಯನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದರು. ಇದರಿಂದಾಗಿ ಕೂಡ ಭಾರತ ಮತ್ತು ಪಾಕ್ ನಡುವಿನ ಬಿಕ್ಕಟ್ಟು ಉಲ್ಬಣವಾಗಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English