ಭಯೋತ್ಪಾದನೆ ವಿರುದ್ಧ ಒಂದಾದ ಅಮೆರಿಕ – ಭಾರತ

0
348

ವಾಷಿಂಗ್ಟನ್: ಜೈಷ್ ಎ ಮೊಹಮದ್, ಲಷ್ಕರ್ ಎ ತೊಯ್ಬಾ ಮತ್ತು ದಾವೂದ್ ವಿರುದ್ಧದ ಭಾರತದ ಹೋರಾಟಕ್ಕೆ ಸಹಕಾರ ನೀಡುವುದಾಗಿ ಅಮೆರಿಕ ಹೇಳಿದೆ. ಇದರೊಂದಿಗೆ ಭಾರತದ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕರಿಗೆ ಅವಕಾಶ ಕೊಡುವುದಿಲ್ಲ ಎಂದು ಭರವಸೆ ನೀಡುವಂತೆ ಕೂಡ ಪಾಕಿಸ್ತಾನವನ್ನು ಆಗ್ರಹಿಸಿದೆ. ಈ ಮೂಲಕ ಎರಡು ದಿನಗಳ ಅಮೆರಿಕ ಭೇಟಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದನೆ ವಿಷಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಜಂಟಿ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂಬೈನ 26/11, ಪಠಾಣ್​​ಕೋಟ್ ಮತ್ತು ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಉಲ್ಲಂಘನೆಗಳು, ಪಾಕ್​​​​​ ಮೂಲದ ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನ ಆದಷ್ಟು ಶೀಘ್ರವಾಗಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಷಯವನ್ನು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಎಸ್ ಜೈಶಂಕರ್ ಸಂಕ್ಷಿಪ್ತವಾಗಿ ವಿವರಿಸಿದರು. ಭಯೋತ್ಪಾದನೆಯ ವಿಷಯದ ಕುರಿತು ಪ್ರಮುಖವಾಗಿ ಮೋದಿ ಮತ್ತು ಟ್ರಂಪ್ ಅವರು ಚರ್ಚಿಸಿದರು ಎಂದರು.

ಪಾಕಿಸ್ತಾನದಿಂದ ಭಾರತದ ಮೇಲೆ ನಡೆಯುತ್ತಿರುವ ಭಯೋತ್ಪಾದಕರ ದಾಳಿ ಕುರಿತು ಕೂಡ ಈ ವೇಳೆ ಚರ್ಚಿಸಲಾಗಿದೆ. ಪಾಕಿಸ್ತಾನದ ಪಾತ್ರದ ಕುರಿತು ವ್ಯಾಪಕ ಚರ್ಚೆ ನಡೆಯಿತು. ಅಲ್ಲದೇ, ಈ ಸಮಸ್ಯೆಯ ಪರಿಹಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡ ಚರ್ಚಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಶ್ವೇತ ಭವನಕ್ಕೆ ಭೇಟಿ ನೀಡಿದರು. ಮೋದಿ ಶ್ವೇತ ಭವನಕ್ಕೆ ಆಗಮಿಸುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಸ್ವಾಗತ ಕೋರಿದರು. ಬಳಿಕ ಉಭಯ ನಾಯಕರು 20 ನಿಮಿಷಗಳ ಕಾಲ ಚರ್ಚಿಸಿದರು. ಈ ವೇಳೆ ಟ್ರಂಪ್ ಮೋದಿಯವರ ಗುಣಗಾನ ಮಾಡಿದರು. ಮೋದಿ ಒಬ್ಬ ಅತ್ಯುತ್ತಮ ನಾಯಕ. ಭಾರತವನ್ನು ಆರ್ಥಿಕ ಕ್ಷೇತ್ರದಲ್ಲಿ ಅತ್ಯಂತ ದೊಡ್ಡಮಟ್ಟದಲ್ಲಿ ಕೊಂಡೊಯ್ದಿದ್ದಾರೆ ಅಂತ ಹೇಳಿದ್ದಾರೆ.

ಇನ್ನು ಭಾರತ ಹಾಗೂ ಅಮೆರಿಕ ದೇಶದ ಹಿರಿಯ ಅಧಿಕಾರಿಗಳು ಸೇರಿದಂತೆ ಉಭಯ ನಾಯಕರು ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ವೈಟ್​ ಹೌಸ್​ನಲ್ಲಿ ಪ್ರಧಾನಿ ಮೋದಿ ಔತಣಕೂಟದಲ್ಲಿ ಭಾಗಿಯಾ ಗುವ ಮೂಲಕ ಟ್ರಂಪ್ ಜೊತೆಗೆ ಭೋಜನ ಕೂಟದಲ್ಲಿ ಭಾಗಿಯಾಗುತ್ತಿರುವ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಭಾಜನರಾದರು. ಎರಡು ದಿನಗಳ ಅಮೆರಿಕ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ ವಾಷಿಂಗ್ಟನ್​ನಿಂದ ನೆದರ್​​ಲ್ಯಾಂಡ್​ಗೆ ಪ್ರಯಾಣ ಬೆಳೆಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English