ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ದನದ ಮುಖವಾಡ

0
173

ಕೊಲ್ಕೊತ್ತಾ: ದೇಶದಲ್ಲಿ ಮಹಿಳೆಯರ ರಕ್ಷಣೆಗಿಂತ ದನಗಳ ರಕ್ಷಣೆಗೆ ಒತ್ತು ಸಿಗುತ್ತಿರುವುದರ ವಿರುದ್ಧ ಕೊಲ್ಕೊತ್ತಾದ ಕಲಾವಿದೆಯೊಬ್ಬರು ದನದ ಮುಖವಾಡ ಧರಿಸಿ ಜನಾಭಿಪ್ರಾಯ ರೂಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಾರುಕಟ್ಟೆ, ಹೊಟೆಲ್, ರಸ್ತೆಗಳಲ್ಲಿ ಸಂಚರಿಸುವ ವೇಳೆ ಅವರು ದನದ ಮುಖವಾಡ ಧರಿಸಿ ಮಹಿಳೆಯರು ಓಡಾಡುವಂತೆ ಪ್ರೇರಣೆ ನೀಡುತ್ತಿದ್ದಾರೆ. ಈ ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಹಲ್ಲೆಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಕೊಲ್ಕೊತ್ತಾದ ಸುಜತ್ರೊ ಘೋಷ್ ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಹೊಸ ದಾರಿ ತುಳಿದಿರುವ ಕಲಾವಿದೆ. ಅಲ್ಲದೇ, ಭಾರತದಲ್ಲಿ ದನದ ರಕ್ಷಣೆಗೆ ಸಿಗುತ್ತಿರುವ ಒತ್ತಿಗಿಂತ ಮಹಿಳೆಯರ ರಕ್ಷಣೆ ಅಗತ್ಯ ಎಂದು ಒತ್ತಿ ಹೇಳುತ್ತಿದ್ದಾರೆ. ಈ ಮೂಲಕ ಮಹಿಳೆಯರ ರಕ್ಷಣೆಯ ಅಗತ್ಯದೆಡೆಗೆ ದೇಶದ ಗಮನ ಸೆಳೆಯುತ್ತಿದ್ದಾರೆ.

ನವದೆಹಲಿಯಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ನಡೆದಿತ್ತು. ಇದು ದೇಶದ ತುಂಬಾ ಮಹಿಳೆಯರ ಮೇಲೆ ನಡೆಯುವ ಹಲ್ಲೆ ಪ್ರಕರಣಗಳು ಕುರಿತು ಗಂಭೀರವಾದ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ, ಅದಾದ ನಂತರ 5ನೇ ವರ್ಷದಲ್ಲಿ ಕೂಡ ಇಂಥ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ರಾಜಧಾನಿಯೊಂದರಲ್ಲೇ 12 ಲೈಂಗಿಕ ದೌರ್ಜನ್ಯ ಮತ್ತು ಕನಿಷ್ಠ ಆರು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಇನ್ನು ಅಪರಾಧಿಗಳ ಪತ್ತೆ ಪ್ರಕರಣದಲ್ಲಿ ಕೂಡ ಶೇ. 50ರಷ್ಟು ಇಳಿಕೆಯಾಗಿದೆ ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ಮಹಿಳೆಯರ ಮೇಲೆ ನಡೆಯುತ್ತಿರುವ ದಾಳಿಗಳ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಸಲುವಾಗಿ ಪೊಲೀಸರು ಸಿಸಿಟಿವಿಗಳನ್ನು ಅಳವಡಿಸಿದ್ದಾರೆ. ಆದರೆ, ಈ ಕ್ರಮ ಕೂಡ ಪ್ರಕರಣಗಳ ನಿಯಂತ್ರಣಕ್ಕೆ ನಿರೀಕ್ಷಿತ ಪ್ರಮಾಣದ ಕೊಡುಗೆ ಕೊಟ್ಟಿಲ್ಲ.

ಇನ್ನು ಇದೇ ಅವಧಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ದಲಿತರ ಮೇಲೆ ಗೋರಕ್ಷಕಡು ನಡೆಸುವ ದಾಳಿಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಎಲ್ಲ ಅಂಶಗಳನ್ನು ಸುಜಾತ್ರೊ ಘೋಷ್ ಪರಸ್ಪರ ಮುಖಾಮುಖಿಯಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಾದ ಸಗಟು ಅಂಗಡಿ, ಮುಂಗಟ್ಟು, ರೈಲು ಹಾಗೂ ತಮ್ಮ ಮನೆಗಳಲ್ಲಿ ಕೂಡ ದನದ ಮುಖವಾಡ ಧರಿಸಿಕೊಳ್ಳುವ ಯೋಜನೆಯೊಂದನ್ನು ಹರಿಬಿಟ್ಟಿದ್ದಾರೆ.

ತಮ್ಮ ಈ ಹೊಸ ಯೋಜನೆ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಎನ್ನುವುದು ಅವರ ವಾದ. ನಾನು ದನಗಳ ರಕ್ಷಣೆಯ ವಿರುದ್ಧ ಇಲ್ಲ. ಪ್ರಾಣಿಗಳನ್ನು ನಾನು ಪ್ರೀತಿಸುತ್ತೇನೆ. ಆದರೆ, ಸಮಾಜೋರಾಜಕೀಯ ಸನ್ನಿವೇಶಗಳ ಕುರಿತು ನನ್ನ ಕಾಳಜಿ ಇದೆ ಎನ್ನುತ್ತಾರೆ. ತಮ್ಮ ನೂತನ ಯೋಜನೆಯ ಮುಖ್ಯಾಂಶಗಳ ಕುರಿತು ಅವರು ಹೇಳುವುದೇನೆಂದರೆ, ಮಹಿಳೆಯರ ರಕ್ಷಣೆ ವಿಷಯದಲ್ಲಿ ಗಂಡಸರ ಧೋರಣೆಯಲ್ಲಿ ಬದಲಾವಣೆಯಾಗಬೇಕು. ವಾಸ್ತವವಾಗಿ ಈ ರಾಜಕಾರಣಿಗಳು ಮತ್ತು ತೀವ್ರಗಾಮಿ ಗುಂಪುಗಳೊಂದಿಗೆ ದೈಹಿಕವಾಗಿ ಹೋರಾಡಲು ಒಂದು ಅವಕಾಶವಿದೆ. ಆದರೆ, ನನ್ನ ಪ್ರಾಥಮಿಕ ಪ್ರಯತ್ನವೆಂದರೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಎನ್ನುತ್ತಾರೆ ಘೋಷ್. ಕಳೆದ ಹದಿನೈದು ದಿನಗಳಿಂದ ಅವರ ಈ ಪ್ರಯತ್ನದಲ್ಲಿ ಭಾರೀ ಯಶಸ್ಸು ಸಿಕ್ಕಿದೆ.

ಇಂಡಿಯಾಸ್ಪೆಂಡ್ ಎಂಬ ಪತ್ರಿಕೋದ್ಯಮ ದತ್ತಾಂಶ ಸಂಗ್ರಹ ಜಾಲತಾಣದ ಅಧ್ಯಯನದ ಪ್ರಕಾರ, ದೇಶದಲ್ಲಿ 2014ರಲ್ಲಿ ಹಿಂದೂ ರಾಷ್ಟ್ರೀಯವಾದಿಗಳಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದನಗಳಿಗೆ ಸಂಬಂಧಿಸಿದ ಹಿಂಸೆಯಲ್ಲಿ ಶೇ. 97ರಷ್ಟು ಏರಿಕೆಯಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English