ಬಹುಮತ ಸಾಬೀತುಪಡಿಸಲಿರುವ ನಿತೀಶ್ ಕುಮಾರ್

0
139

ಪಾಟ್ನಾ: ನಿನ್ನೆ ಎನ್​ಡಿಎ ಮೈತ್ರಿಕೂಟದ ಬೆಂಬಲದೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಇಂದು ವಿಧಾನಸಭೆಯ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ. ಬೆಳಿಗ್ಗೆ 11ಕ್ಕೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದ್ದು, 132 ಶಾಸಕರು ನಿತೀಶ್ ಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬಹುಮತ ಸಾಬೀತು ಪಡಿಸುವುದು ಬಹುತೇಕ ನಿಶ್ಚಿತವಾಗಿದೆ. ಆದರೆ, ಎಸ್ ಆರ್ ಬೊಮ್ಮಾಯಿ ಪ್ರಕರಣವನ್ನು ಉಲ್ಲೇಖಿಸಿ, ಆರ್​ಜೆಡಿ ಮತ್ತು ಕಾಂಗ್ರೆಸ್ ಶಾಸಕರಿಂದ ಸದನದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ.

243 ಸದಸ್ಯ ಬಲದ ಬಿಹಾರದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರ್​ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆರ್​ಜೆಡಿ – 80, ಜೆಡಿಯು – 71 ಬಿಜೆಪಿ – 53, ಕಾಂಗ್ರೆಸ್​ – 27, ಎಲ್​ಜೆಪಿ – 2, ಆರ್​ಎಲ್​ಎಸ್​ಪಿ – 2, ಎಚ್​ಎಎಮ್​ – 1 ಹಾಗೂ ಪಕ್ಷೇತರ – 7 ಶಾಸಕರು ಆಯ್ಕೆಯಾಗಿದ್ದರು. ಬಹುಮತಕ್ಕೆ 123 ಶಾಸಕರ ಬೆಂಬಲ ಅಗತ್ಯವಾಗಿದ್ದು, 132 ಶಾಸಕರ ಬೆಂಬಲ ಇರುವುದರಿಂದ ನಿತೀಶ್ ಅನಾಯಾಸವಾಗಿ ಬಹುಮತ ಸಾಬೀತುಪಡಿಸಲಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ್ದ ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಏಕೈಕ ದೊಡ್ಡ ಪಕ್ಷವಾಗಿರುವ ತಮ್ಮ ಪಕ್ಷಕ್ಕೆ, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಬೇಕಿತ್ತು. ಆದರೆ, ನಿತೀಶ್ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್​​ನಲ್ಲಿ ಹೋರಾಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ನಿತೀಶ್ ಕುಮಾರ್ ಅವರ ವಿಶ್ವಾಸಮತ ಯಾಚನೆ ಮೇಲೆ ಕೋರ್ಟ್​​​​​​​ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕೂಡ ಇದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English