ಯುವತಿ ಹಿಂಬಾಲಿಸಿದ ಪ್ರಕರಣದಲ್ಲಿ ಬಿಜೆಪಿ ಮುಖ್ಯಸ್ಥನ ತಲೆದಂಡ!

0
155

ಚಂಡೀಗಢ: ಐಎಎಸ್ ಅಧಿಕಾರಿಯ ಪುತ್ರಿಯನ್ನು ಹಿಂಬಾಲಿಸಿದ್ದ ಹರಿಯಾಣ ರಾಜ್ಯದ ಬಿಜೆಪಿ ಮುಖ್ಯಸ್ಥರ ರಾಜೀನಾಮೆಗೆ ಸ್ವಪಕ್ಷೀಯರಿಂದಲೇ ಒತ್ತಡ ಕೇಳಿ ಬಂದಿದೆ. ಸುಭಾಷ್ ಬರಾಲಾ ರಾಜೀನಾಮೆ ನೀಡಬೇಕು ಎಂದು ಕುರುಕ್ಷೇತ್ರದ ಬಿಜೆಪಿ ಸಂಸದ ರಾಜ್​ಕುಮಾರ್ ಸೈನಿ ಆಗ್ರಹಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಸ್ವಪಕ್ಷೀಯರಿಂದಲೇ ಮುಗುಗರ ಎದುರಾಗಿದೆ.

ಕಳೆದ ಶುಕ್ರವಾರ ಹರಿಯಾಣ ರಾಜ್ಯ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲ ಅವರ ಪುತ್ರ ವಿಕಾಸ್ ಬರಾಲ ಅವರನ್ನು ಯುವತಿಯನ್ನು ಹಿಂಬಾಲಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ವಿವಿಧ ಐಪಿಸಿ ಸೆಕ್ಷನ್​ಗಳ ಅಡಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೈಕ್​​ನಲ್ಲಿ ಇಬ್ಬರು ತಮ್ಮನ್ನು ಹಿಂಬಾಲಿಸಿರುವುದಾಗಿ ಐಎಎಸ್ ಅಧಿಕಾರಿಯೊಬ್ಬರ ಪುತ್ರಿ ದೂರು ನೀಡಿದ್ದರು.

ಈ ದೂರನ್ನು ಆಧರಿಸಿ ಬಿಜೆಪಿ ಮುಖ್ಯಸ್ಥನ ಪುತ್ರನನ್ನು ಬಂಧಿಸಲಾಗಿತ್ತು. ಚಂಡೀಗಢದಲ್ಲಿ ಈ ಘಟನೆ ನಡೆದಿದ್ದು, 7 – 8 ಕಿ.ಮೀ. ದೂರದವರೆಗೆ ತನ್ನನ್ನು ಹಿಂಬಾಲಿಸಿದ್ದಲ್ಲದೇ, ಮಾರ್ಗ ಮಧ್ಯದಲ್ಲಿ ತಡೆದು ನಿಲ್ಲಿಸಲು ಹಾಗೂ ಕಾರಿನ ಬಾಗಿಲನ್ನು ತೆರೆಯಲು ವಿಕಾಸ್ ಮತ್ತು ಸಹಚರರು ಪ್ರಯತ್ನಿಸಿದ್ದರು ಎಂದು ಯುವತಿ ದೂರಿದ್ದರು.

ಆದರೆ, ನಂತರ ನಡೆದ ಬೆಳವಣಿಗೆಗಳಲ್ಲಿ ದಾಖಲಿಸಿಕೊಂಡ ದೂರನ್ನು ಪೊಲೀಸರು ಕೈಬಿಟ್ಟಿದ್ದರು. ಅಲ್ಲದೇ, ಯುವತಿಯನ್ನು ಹಿಂಬಾಲಿಸಿದ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಅಳಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುಭಾಷ್ ಬರಾಲಾ ರಾಜೀನಾಮೆಗೆ ಒತ್ತಡ ಕೇಳಿಬಂದಿತ್ತು.

ಪಕ್ಷದ ವರ್ಚಸ್ಸಿನ ರಕ್ಷಣೆಗಾಗಿ ಸುಭಾಷ್ ರಾಜೀನಾಮೆ ನೀಡಲಿ ಎಂದು ರಾಜ್​ಕುಮಾರ್ ಸೈನಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಮನೆಯಿಂದಲೇ ವರ್ತನೆಗಳ ಕಲಿಕೆ ಆರಂಭವಾಗುತ್ತದೆ. ಮೌಲ್ಯಗಳನ್ನು ಕಲಿಸದಿದ್ದಲ್ಲಿ ಇಂಥ ವರ್ತನೆಗಳು ಕಂಡುಬರುತ್ತವೆ ಎಂದಿದ್ದಾರೆ. ಜೊತೆಗೆ, ಶೇ. 90ರಷ್ಟು ಬಾಲಕಿಯರು ಇಂಥ ವಿಷಯಗಳನ್ನು ಹೇಳಿಕೊಳ್ಳುವುದಿಲ್ಲ. ಆದರೆ, ಈ ವಿಷಯವನ್ನು ಬಾಲಕಿ ಧೈರ್ಯವಾಗಿ ಮಾಧ್ಯಮದವರ ಎದುರು ಹೇಳಿಕೊಂಡಿದ್ದಾಳೆ. ಈ ಬಾಲಕಿಯನ್ನು ರಕ್ಷಿಸದಿದ್ದಲ್ಲಿ ತಪ್ಪಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆಯನ್ನು ಖಂಡಿಸಿದ್ದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ, ಬಿಜೆಪಿಗರ ಒತ್ತಡದ ನಂತರ ದೂರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ, ಅಪರಾಧಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಕೂಡ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಕಡೆಗೆ ಸುಭಾಷ್ ಬರಾಲಾ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English