ಒಸಾಮಾ ಬಿನ್ ಲಾಡೆನ್​​ನಿಂದ ವಶಪಡಿಸಿಕೊಂಡ ಕಡತಗಳ ಬಿಡುಗಡೆ

0
186

ವಾಷಿಂಗ್ಟನ್: ಅಮೆರಿಕಾದ ಕೇಂದ್ರೀಯ ತನಿಖಾ ಸಂಸ್ಥೆ ಒಸಾಮಾ ಬಿನ್ ಲಾಡೆನ್​​ನಿಂದ ವಶಪಡಿಸಿಕೊಂಡ ಸಾವಿರಾರು ಕಡತಗಳನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಅಬೋಟಾಬಾದ್​​ನಲ್ಲಿ ಅವಿತುಕೊಂಡಿದ್ದ ಉಗ್ರ ಲಾಡೆನ್​ನನ್ನು 2011ರಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೊಂದು ಹಾಕಲಾಗಿತ್ತು. ಈ ವೇಳೆ ಅಲ್ಲಿ ಮಹತ್ವದ ಕಡತಗಳನ್ನು ವಶಪಡಿಸಿಕೊಳ್ಳಲಾಗಿತ್ತು. 10 ಸಾವಿರ ವೀಡಿಯೋಗಳು, 18,000 ಆಡಿಯೋಗಳು 79,000 ಫೋಟೋಗಳನ್ನು ಬಿಡಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಸಿಐಎ ನಿರ್ದೇಶಕ ಮೈಕ್ ಪಾಂಪೆ ಕಡತಗಳನ್ನು ಬಿಡುಗಡೆ ಮಾಡಿದ್ದು, ಭಯೋತ್ಪಾದಕರ ವಿರುದ್ಧ ಅಮೆರಿಕಾ ನಡೆಸಿರುವ ದಾಳಿಯ ಯೋಜನೆಗಳ ಕುರಿತು ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಒಸಾಮಾ ಬಿನ್ ಲಾಡೆನ್ ಪುತ್ರ ಹಂಜಾನನ್ನು ಪತ್ತೆ ಹಚ್ಚುವುದು ಸೇರಿದಂತೆ, ಅಲ್ ಖೈದಾ ಮತ್ತು ಇರಾನ್, ಇರಾಕ್ ರಾಷ್ಟ್ರಗಳಲ್ಲಿ ಇರುವ ಸಂಬಂಧದ ಕುರಿತು ಕೂಡ ಹೆಚ್ಚಿನ ಮಾಹಿತಿಗಳು ದಾಖಲೆಗಳಲ್ಲಿವೆ ಎಂದು ಹೇಳಲಾಗಿದೆ. ತಿಂಗಳುಗಟ್ಟಲೇ ದಾಳಿ ನಡೆಸಿ ಸಂಗ್ರಹಿಸಲಾಗಿದ್ದ ಕಡತಗಳಲ್ಲಿ ಭಯೋತ್ಪಾದಕ ಸಂಘಟನೆ, ವಿಸ್ತರಣೆ, ಕಾರ್ಯತಂತ್ರ ಇತ್ಯಾದಿಗಳ ಕುರಿತು ಕೂಡ ಮಹತ್ವದ ದಾಖಲೆಗಳಿರುವ ಸಾಧ್ಯತೆಗಳು ಇವೆ.

ಅಲ್ ಖೈದಾ ಮತ್ತು ಐಸಿಸ್​ಗಳು ಪ್ರಬಲವಾಗುತ್ತಿರುವ ಹೊತ್ತಿನಲ್ಲಿ ಇಂಥ ದಾಖಲೆಗಳು ಬಹಿರಂಗವಾಗಬೇಕು ಎಂದು ಕೆಲವು ಅಮೆರಿಕನ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಈ ದಾಖಲೆಗಳು ಅಲ್​ಖೈದಾ ಕುರಿತು ಇತಿಹಾಸ ರಚಿಸುವ ಇತಿಹಾಸಕಾರರಿಗೂ ಸಾಕಷ್ಟು ಖಚಿತ ದಾಖಲೆಗಳನ್ನು ಒದಗಿಸುತ್ತವೆ ಎಂದಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡದಿರಲು ಕೂಡ ನಿರ್ಧರಿಸಲಾಗಿದೆ. ಅಲ್ಲದೇ, ಇವುಗಳನ್ನು ಮಾಲ್​ವೇರ್​ಗಳಿಂದ ಕೂಡ ನಕಲು ಮಾಡಲಾಗದಂತೆ ಸಂರಕ್ಷಿಸಿಡುವ ಕೆಲಸಕ್ಕೆ ಮುಂದಾಗಿದೆ. ಇವುಗಳ ಹಕ್ಕು ಸ್ವಾಮ್ಯವನ್ನು ಕೂಡ ಸಾಧಿಸಲು ಅಮೆರಿಕ ಮುಂದಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 Click this button or press Ctrl+G to toggle between Kannada and English