ಬಾಯಿ ದುರ್ನಾತ ತಡೆಯಲು ಇದನ್ನ ಟ್ರೈ ಮಾಡಿ

0
285

ಬಾಯಲ್ಲಿ ದುರ್ವಾಸನೆ ಬರೋದು ಒಂದಲ್ಲ ಒಂದು ಬಾರಿ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಧೂಮಪಾನಿಗಳು, ಮದ್ಯ, ಮಾಂಸ ಸೇವಿಸುವವರ ಬಾಯಿ ಮಾತ್ರ ಕೆಟ್ಟ ವಾಸನೆಯಂತೆ ದುರ್ನಾತ ಬೀರುತ್ತದೆ ಎಂದು ಮೂಗು ಮುಚ್ಚಿಕೊಳ್ಳುವವರು ಸ್ವಲ್ಪ ತಮ್ಮ ಬಾಯೆಂಬ ಬ್ರಹ್ಮಾಂಡವನ್ನು ನೋಡಿಕೊಳ್ಳುವುದು ಒಳಿತು. ಬಾಯಿ ದುರ್ನಾತಕ್ಕೆ ಅನೇಕ ಪರಿಹಾರ ಉಪಾಯಗಳಿದ್ದು, ಸರಳ ಹಾಗೂ ಸುಲಭ ವಿಧಾನಗಳಿಂದ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ. ಬಾಯಿ ದುರ್ವಾಸನೆ ಬಾರದಂತೆ ತಡೆಗಟ್ಟುವುದು ಕೂಡಾ ಅತಿ ಮುಖ್ಯ.

ಬಾಯಿ ದುರ್ನಾತ ತಡೆಯಲು ಸರಳ ವಿಧಾನಗಳು:

* ದಿನನಿತ್ಯ ಎರಡು ಬಾರಿ ಸಾಫ್ಟ್ ಅಥವಾ ಸೆಮಿ ಸಾಫ್ಟ್ ಬ್ರಷ್ ಬಳಸಿ ಬ್ರಷ್ ಮಾಡಿ, ಆಹಾರ ಸೇವನೆ ನಂತರ, ರಾತ್ರಿ ಮಲಗುವ ಮುನ್ನ ಬಾಯಿ ಮುಕ್ಕಳಿಸುವುದನ್ನು ಮರೆಯಬೇಡಿ. ಅದರಲ್ಲೂ ಹಲ್ಲು ಹುಳುಕು ಇದ್ದವರಿಗೆ ಬಾಯಿ ಮುಕ್ಕಳಿಸುವುದು ಕಡ್ಡಾಯ.

* ಉಗುರು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು ಹಲ್ಲು, ಬಾಯಿ ಹಾಗೂ ಗಂಟಲು ಸ್ವಚ್ಛತೆಗೆ ಅನುಕೂಲ. ಇಲ್ಲದಿದ್ದರೆ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ರೆಡಿಮೇಡ್ ಮೌಥ್ ವಾಷ್ ಗಳನ್ನು ಬಳಸಬಹುದು. ಆದರೆ, ಹೆಚ್ಚು ಕೆಮಿಕಲ್ ಹಾಗೂ ಆಲ್ಕೋಹಾಲ್ ಯುಕ್ತ ಮೌಥ್ ವಾಷ್ ಬಳಸಬೇಡಿ.

* ಸೂರ್ಯಕಾಂತಿ ಬೀಜಗಳು ಬಾಯಿ ದುರ್ನಾತ ತೊಲಗಿಸಲು ತುಂಬಾ ಉಪಯುಕ್ತವಾಗಲಿದೆ. ಅದರಲ್ಲೂ ನಾನ್ ವೆಜ್ ತಿನ್ನುವವರು ಸ್ವಲ್ಪ ಸೂರ್ಯಕಾಂತಿ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಅಗೆದು, ನೀರು ಕುಡಿದರೆ ಸಾಕು. ದುರ್ಗಂಧ ದೂರವಾಗುತ್ತದೆ.

* ದಿನಕ್ಕೊಂದು ಸೇಬು ಬಳಸಿದರೆ ವೈದ್ಯರನ್ನು ದೂರವಿಡಬಹುದು ಎಂಬ ಮಾತು ನಿಜ. ಸೇಬು ಹಣ್ಣು ತಿನ್ನುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಬಾಯಿ ಸ್ವಚ್ಛವಾಗುತ್ತದೆ.

* ನಿಂಬೆ ಹಣ್ಣು ತುಂಬಾ ಪರಿಣಾಮಕಾರಿಯಾಗಬಲ್ಲುದು. ನಿಂಬೆ ರಸವನ್ನು ಬಿಸಿ ನೀರಿನೊಂದಿಗೆ ಸೇವಿಸಿ ಬಾಯಿ ಗಳಗಳ ಮಾಡುತ್ತಾ ಬಂದರೆ, ಬಾಯಿ ದುರ್ವಾಸನೆ ನಾಶವಾಗಿ ಹೊಸ ಆಹ್ಲಾದ ಮೂಡುತ್ತದೆ.

* ಒಂದೆರಡು ಏಲಕ್ಕಿ ಎಸಳುಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತಾ ಇರಿ. ಏಲಕ್ಕಿ ಅಗಿಯುವುದರಿಂದ ಮೈ ಕೂಡಾ ಬೆಚ್ಚಗಾಗುತ್ತದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಸಿಗುವ ಮೌಥ್ ರಿಫ್ರೆಷ್ ನರ್ ಗಿಂತ ನೈಸರ್ಗಿಕವಾದ ಏಲಕ್ಕಿ ಸೇವನೆ ಉತ್ತಮ. ಇದಲ್ಲದೆ, ಮಿಂಟ್, ಪುದೀನ ಬರಿತ ಕ್ಯಾಂಡಿಗಳು, ಈರುಳ್ಳಿ, ಕರಿಬೇವು ಮುಂತಾದವುಗಳನ್ನು ಸೇವಿಸಿ ಧೂಮಪಾನಿಗಳು ತಮ್ಮ ಚಟದಿಂದ ಇತರರಿಗೆ ಉಂಟಾಗುವ ಮುಜುಗರ, ತೊಂದರೆಗಳನ್ನು ತಪ್ಪಿಸಲು ಹೆಣಗುತ್ತಾರೆ.

* ದುಶ್ಚಟಗಳ ಸಹವಾಸವಿಲ್ಲದವರೂ ಕೂಡಾ ಬಾಯಿ ದುರ್ನಾತಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಹುಳುಕು ಹಲ್ಲು ಇದ್ದರೆ ಮೊದಲು ಸರಿಪಡಿಸಿಕೊಳ್ಳಿ. ಕಾಫಿ ಸೇವನೆ ಚಟವುಳ್ಳವರು ಕಾಫಿಗಿಂತ ಟೀ ಸೇವಿಸುವುದು ಒಳ್ಳೆಯದು. ಬಾಯಿ ದುರ್ನಾತ ತಡೆಗೆ ಚಹಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ, ಚಹಾ ಪುಡಿ ಕಲಬೆರಕೆ ವ್ಯಾಪಕವಾಗಿರುವ ಕಾರಣ, ಕಾಫಿ ಇರಲಿ, ಟೀ ಇರಲಿ ಕುಡಿದ ನಂತರ ಬಾಯಿ ಮುಕ್ಕಳಿಸುವುದು ಒಳ್ಳೆಯದು.

 Click this button or press Ctrl+G to toggle between Kannada and English